Thursday, February 25, 2016

ಭರ್ತೃಹರಿಯ ನೀತಿ ಶತಕದಿಂದ ದಿಂದ ಪ್ರೇರಿತ

ಹಸಿದಿರಲಿ ಬಳಲಿರಲಿ ಮುಪ್ಪಿರಲಿ ಕುಂದಿರಲಿ,
ಸ್ವಭಾವತಹ ವನರಾಜ ಸಿಂಹವದು ಏನಾದರಾಗಿರಲಿ,
ಗಜಕುಂಭದ ಮಾಂಸದಾಸೆಯದು ಮರೆಯಾದೀತೆ?
ಹಸಿವು ಹೆಚ್ಚಿದೆಯೆಂದು ಒಣ ಹುಲ್ಲ ತಿಂದೀತೆ?
ಸ್ವಾಭಿಮಾನದ ನಿಜಜ್ಞಾನಿ ತುತ್ತನ್ನಕೆ ಕೈ ಚಾಚಲಾದೀತೆ?
ಶೀಲ ಮತಿ ಮತ ಮಾನರಕ್ಷಣೆಗೆ ಹೋರಾಡದಿರಲಾದೀತೆ?

ಮಾಂಸವಿರದ ಒಣ ಮೂಳೆಯೇ ನಾಯಿಗೆ ಸಾಕು,
ಬೇರೇನಿದ್ದರೂ ಎದುರಿಗೆ ಸಿಂಹಕೆ ಆನೆಯೇ ಬೇಕು,
ಯಾರಿದ್ದರೂ ತಮ್ಮ ಶಕ್ತಿಗನುಗುಣವಾದ ಫಲದ್ದೇ ನಿರೀಕ್ಷೆ,
ಅದನು ಪಡೆಯುವ ಪಡಿಪಾಟಲೇ ಜೀವನವೆಂಬ ಪರೀಕ್ಷೆ.

ಹುಟ್ಟು ಸಾವುಗಳ ಚಕ್ರವದು ಅಬಾಧಿತ,
ಯಾರೂ ಆಗಲಾರರು ಇದರಿಂದ ಮುಕ್ತ,
ಯಾವಜೀವಿಯ ಹುಟ್ಟು ವಂಶಕೆ ತರುವುದೋ ಕೀರ್ತಿ,
ಸಾರ್ಥಕ ಹುಟ್ಟದು ತೋರುವುದು ನಿಜ ಮುಕ್ತಿ.

ಅತಿಕಾಮಿಗಿಂತ ರೋಗಿಯಿಲ್ಲ,
ಭ್ರಾಂತಿ ಭ್ರಮೆಗಿಂತ ವೈರಿಯಿಲ್ಲ,
ಕೋಪಕ್ಕೆ ಮಿಗಿಲಾದ ಬೆಂಕಿಯಿಲ್ಲ,
ಜ್ಞಾನಿಗಿಂತ ಮಿಗಿಲಾದ ಸುಖಿಯಿಲ್ಲ.

ಬೇಕೋ ನಿನಗೆ ಹೆಸರು ಕೀರ್ತಿ,
ಬೇಡ ಪರರ ನಿಂದನೆ ಅಪಕೀರ್ತಿ,
ಸದ್ಗುಣಗಳ ಆಚರಣೆಯದು ಇರಲಿ,
ಹೆಸರು ಕೀರ್ತಿಯ ನಡತೆಯದು ತರಲಿ.

(Contributed by Shri Govind Magal)



No comments:

Post a Comment