Saturday, February 27, 2016

Neeti Shataka Shloka 13

ಅಧಿಗತಪರಮಾರ್ಥಾನ್ ಪಂಡಿತಾನ್  ಮಾವಮಂಸ್ಥಾಃ
ತೃಣಮಿವ ಲಘು ಲಕ್ಷ್ಮೀರ್ನೈವ ತಾನ್ಸಂರುಣದ್ಧಿ |
ಅಭಿನವಮದರೇಖಾ ಶ್ಯಾಮಗಂಡಸ್ಥಲಾನಾಂ
ನ ಭವತಿ ಬಿಸತಂತುರ್ವಾರಣಂ ವಾರಣಾನಾಮ್||13||

अधिगतपरमार्थान् पंण्डितान् मावमंस्थाः
तृणमिव लघु लक्ष्मीर्नैव तान्संरुणद्धि|
अभिनवमदरेखा श्यामगंडस्थलानां
न भवति बिसतंतुर्वारणं वारणानाम्||13||

adhigataparamārthān paṇḍitān māvamansthāḥ
tr̥ṇamiva laghu lakṣmīrnaiva tānsanruṇad'dhi |
abhinavamadarēkhā śyāmagaṇḍasthalānāṁ
na bhavati bisatanturvāraṇaṁ vāraṇānām||13||

ಈ ಶ್ಲೋಕ "ಮಾಲಿನೀ ವೃತ್ತ" ದಲ್ಲಿದೆ... 15 ಅಕ್ಷರಗಳ 4 ಸಾಲುಗಳು ಒಟ್ಟಾರೆ 60 ಅಕ್ಷರದ ಛಂದಸ್ಸು... ಪ್ರತಿಸಾಲಿನ 8ನೇ ಅಕ್ಷರಕ್ಕೆ ವಿರಾಮಕೊಟ್ಟು ಉಚ್ಚರಿಸುವುದು ಮಾಲಿನೀ ವೃತ್ತದ ಲಕ್ಷಣ...

ಹಿಂದೆಲ್ಲ ಪಂಡಿತರು ರಾಜಾಶ್ರಯ ಪಡೆದವರೇ, ಅನೇಕ ಪಂಡಿತರು ರಾಜನ ಹೊಗಳು ಭಟರೇ, ಹಾಗೆ ಮಾನ-ಸನ್ಮಾನಗಳಿಂದ, ಪ್ರಶಸ್ತಿಗಳಿಂದ ದುಡ್ಡಿನಿಂದ ಪಂಡಿತರನ್ನು ಕೊಂಡುಕೊಳ್ಳಬಹುದೇ ?... ಎಂಬ ಪ್ರಶ್ನೆಗೆ ಭರ್ತೃಹರಿ ಹೇಳುತ್ತಾನೆ,
ನಿಜವಾದ ವಿದ್ವಾಂಸರು ದುಡ್ಡಿಗೆ ಮರುಳಾಗುವುದಿಲ್ಲ....

ಹಾಗಾದರೆ ಯಾರು ನಿಜವಾದ ಪಂಡಿತರು ? ಜಗತ್ತಿನ ಮೂಲಭೂತ ಸತ್ಯವನ್ನು ಅರಿತ ವಿದ್ವಾಂಸರು ಯಾರಿದ್ದಾರೋ ಅವರು ಮಾತ್ರ ನಿಜವಾದ ಪಂಡಿತರು...
ಇಂದು ನಾವು ಪಂಡಿತ ಶಬ್ದವನ್ನು ತುಂಬಾ ಕೀಳು ಅರ್ಥದಲ್ಲಿ ಬಳಸುತ್ತಿದ್ದೇವೆ... Bookish Knowledge ಇರುವವರೆಲ್ಲ ಪಂಡಿತರಲ್ಲ... "ಪಂಡ ಅಸ್ಯ ಸಂಜಾತ ಇತಿ ಪಂಡಿತಃ"... "ಪಂಡ" ಅಂದರೆ ಅಧ್ಯಾತ್ಮದ ಅರಿವು... ಆ ಅಧ್ಯಾತ್ಮದ ಅರಿವು ಯಾರಲ್ಲಿ ಸಹಜವಾಗಿ ಹುಟ್ಟಿದೆಯೋ, ಒಲಿದು ಬಂದಿದೆಯೋ ಅವರು ಪಂಡಿತರು....

ಯಾರು ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೋ ಅಂಥಹ ಜ್ಞಾನಿಗಳನ್ನು , ಎಲೈ ರಾಜನೇ !! ಎಂದಿಗೂ ತಿರಸ್ಕಾರ ಮಾಡಬೇಡ, ಅವಮಾನ ಮಾಡಬೇಡ... ನಿನಗೆ ಶ್ರೇಯಸ್ಸಾಗುವುದಿಲ್ಲ...
ಏಕೆಂದರೆ, ದುಡ್ಡಿನ ಸಂಪತ್ತು ಅವರಿಗೆ ಹುಲ್ಲಿಗಿಂತ ಕಡೆ... ನಿಜವಾದ ಜ್ಞಾನಿಯ ಪ್ರಜ್ಞೆಗೆ ಈ ದುಡ್ಡಿನರಾಶಿ ಎಂದಿಗೂ ಪ್ರತಿಬಂಧಕವಾಗುವುದಿಲ್ಲ... ದುಡ್ಡು ಅವರನ್ನು ಮೋಹಗೊಳಿಸುವುದಿಲ್ಲ...
ಅವರಿಗೆ ಅಂತರಂಗದ ಸಂಪತ್ತು ಸಿಕ್ಕಿದೆ, ಅದೇ ಅವರಿಗೆ ದೊಡ್ಡ ಸಂಪತ್ತು...

ಇದನ್ನು ಒಂದು ದೃಷ್ಟಾಂತ ಕೊಟ್ಟು ಹೇಳುತ್ತಾನೆ... ಒಂದು ಮತ್ತೇರಿದ ಆನೆ, ಅದೂ ಕೂಡ ಮೊದಲ ಬಾರಿ ಮದ ಬಂದ ಆನೆ. ಅದರ ಹತ್ತಿರ ಹೋಗಲಿಕ್ಕೆ ನುರಿತ ಮಾವುತರೂ ಹೆದರುತ್ತಾರೆ... ಹೀಗೆ ಮತ್ತೇರಿದಾಗ ಅವುಗಳ ಹಣೆಯಲ್ಲಿ ಕಪ್ಪುನೀರು ಇಳಿಯುತ್ತದೆ, ಅಂಥಹ ಕಪ್ಪಾದ ಗಂಡಸ್ಥಳವುಳ್ಳ ಆನೆಯನ್ನು ಕಮಲದ ನಾಳದಿಂದ ಕಟ್ಟಿಹಾಕುವ ಪ್ರಯತ್ನ ಮಾಡುವುದು ಎಷ್ಟು ಮೂರ್ಖತನವೋ, ಹಾಗೆ ದುಡ್ಡಿನ ಪ್ರಲೋಭನೆಯಿಂದ ಒಬ್ಬ  ವಿದ್ವಾಂಸನನ್ನು, ಪಂಡಿತನನ್ನು ಮೋಸ ಮಾಡಲಿಕ್ಕೆ ಪ್ರಯತ್ನ ಪಡುವುದು...

ಅಂಥಹ ಆಮಿಷಗಳಿಗೆ ಬಲಿಯಾದ ಪಂಡಿತರಿದ್ದರೆ ಅವರು ವಿದ್ವಾಂಸರಲ್ಲ... ಆದ್ದರಿಂದ ಎಲೈ ರಾಜನೇ, ನಿನ್ನ ದುಡ್ಡಿನ ಮದದಿಂದ ಪಾಂಡಿತ್ಯಕ್ಕೆ , ಜ್ಞಾನಕ್ಕೆ , ವಿದ್ಯೆಗೆ ಅವಮಾನ ಮಾಡಬೇಡ... ಜ್ಞಾನಕ್ಕೆ ಗೌರವ ಕೊಡದ ದೇಶ ಎಂದೂ ಮುಂದುವರೆಯುವುದಿಲ್ಲ ಬೇಗ ನಾಶಹೊಂದುತ್ತದೆ...

ಸ್ಮೃತಿಕಾರ "ಮನು" ಹೇಳಿದ ಮಾತು ಹೀಗಿದೆ:-
ವಿತ್ತಂ ಬಂಧುಃ ವಯಃ ಕರ್ಮ
ವಿದ್ಯಾಚೈವತು ಪಂಚಮೀ |
ಏತಾನಿ ಮಾನ್ಯ ಸ್ಥಾನಾನಿ 
ಗರೀಯೋ ಯದ್ಯದುತ್ತರಮ್ ||

ಸಮಾಜದ ವ್ಯಕ್ತಿಗಳನ್ನು ಅವರವರ ಸಾಧನೆಯ ಅರ್ಹತೆಗಳಿಗೆ ತಕ್ಕಂತೆ ಗೌರವಿಸಲೇಬೇಕಾದ ಐದು ಸ್ಥಾನಗಳನ್ನು ಮನು ಹೇಳಿದ : ಧನ, ಬಾಂಧವ್ಯ, ವಯೋಮಾನ, ಸಮಾಜಸೇವೆ ಮತ್ತು ವಿದ್ಯೆ...

ಆದರೆ ಆ ಗೌರವ ಸ್ಥಾನಗಳ ಪ್ರಾಮುಖ್ಯತೆ ಕೆಳಗಿನಿಂದ ಮೇಲಕ್ಕೆ ಅಂತ ಮನು ಎಚ್ಚರಿಸಿದ (ಗರೀಯೋ ಯದ್ಯದುತ್ತರಮ್) ಅಂದರೆ , ವಿದ್ಯೆಗೆ ಮೊದಲ ಮಣೆ, ಗರಿಷ್ಠ  ಸ್ಥಾನ.... ಹಣಕ್ಕೆ ಕೊನೆಯ ಮಣೆ ಕನಿಷ್ಠ ಸ್ಥಾನ.... ಆದರೆ ಇಂದು ಇದೆಲ್ಲ ಅದಲು-ಬದಲಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ...

ವಿತ್ತಂ : ಪೂರ್ವಜನ್ಮದ ಸುಕೃತದಿಂದ ಒಬ್ಬನಲ್ಲಿ ಅಪಾರ ಧನ ಸಂಗ್ರಹವಾಯಿತು, ಆತ ಅದನ್ನು ಧರ್ಮ ಕಾರ್ಯದಲ್ಲಿ , ಸಮಾಜದ ಏಳಿಗೆಗಾಗಿ ಬಳಸಿದಾಗ, ಆ ಸಂಪತ್ತು ಸದುಪಯೋಗವಾಯಿತು. ಆಗ ಸಮಾಜ ಅವನನ್ನು ಗೌರವಿಸುತ್ತದೆ..

ಬಂಧುಃ : ಹಣಕ್ಕಿಂತ ಬಾಂಧವ್ಯ ದೊಡ್ಡದು... ಹಣಕಾಸಿನ ವ್ಯವಹಾರದಲ್ಲಿ ಎಂದೂ ಬಾಂಧವ್ಯ ಕಡಿದು ಹೋಗಬಾರದು, ಆದ್ದರಿಂದ ಬಂಧುಗಳನ್ನು ಗೌರವಿಸು....

ವಯಃ : ಒಬ್ಬನಲ್ಲಿ ಹಣವಿರಬೇಕಾಗಿಲ್ಲ , ಆತ ಬಂಧುವಾಗಿರಬೇಕಾಗಿಲ್ಲ , ಕೇವಲ ವಯಸ್ಸಿನಿಂದ ಯಾರು ಹಿರಿಯರೋ ಅವರನ್ನು ಗೌರವಿಸು.. ಅವರಲ್ಲಿ ಜ್ಞಾನ ಇಲ್ಲದಿರಬಹುದು ಆದರೂ ಭಗವಂತ ಅವರೊಳಗಿದ್ದು ನಮಗಿಂತ ಹೆಚ್ಚು ಕಾಲದಿಂದ ಅವರನ್ನು ಬದುಕಿಸಿದ್ದಾನೆ ಎಂದು ವಯಸ್ಸಿಗೆ ಗೌರವ ಕೊಡು...

ಕರ್ಮ:  ಒಬ್ಬ ಸಮಾಜಸೇವೆಯನ್ನೇ ತನ್ನ ಜೀವನ ಧರ್ಮವಾಗಿರಿಸಿಕೊಂಡು ಸಮಾಜದ ಏಳಿಗೆಗಾಗಿ ನಿರಂತರ ದುಡಿಯುತ್ತಿದ್ದರೆ, ಅಂಥಹ ವ್ಯಕ್ತಿಯಲ್ಲಿ ಹಣ ಇರಬೇಕಾಗಿಲ್ಲ , ಆತ ನಮ್ಮ  ಬಂಧುವಾಗಿರಬೇಕಾಗಿಲ್ಲ, ಅವನ ವಯೋಮಾನದ ಇತಿ-ಮಿತಿಗಳನ್ನು ನೋಡಬೇಕಾಗಿಲ್ಲ , ಸಮಾಜಕ್ಕೆ ಅವನು ಮಾಡಿದ ಉಪಕಾರ ಸ್ಮರಣೆಯಿಂದ ಅವನನ್ನು ಗೌರವಿಸು...

ವಿದ್ಯೆ :- ಸಮಾಜದಲ್ಲಿ ಒಬ್ಬ ದೊಡ್ಡ ವಿದ್ವಾಂಸ, ಜ್ಞಾನಿ ಎಲ್ಲಕ್ಕಿಂತ ಮಿಗಿಲು.. ಸರ್ವಶ್ರೇಷ್ಠ... ನಮ್ಮ ಪೂರ್ವೀಕರು ವಿದ್ಯಾಕ್ಷೇತ್ರಕ್ಕೆ ಕೊಟ್ಟಂತಹ ಗೌರವವನ್ನು ಇನ್ನಾವುದೇ ಕ್ಷೇತ್ರಕ್ಕೂ ಕೊಡಲಿಲ್ಲ.. ಜ್ಞಾನಪ್ರಸಾರದಿಂದಲೇ ಒಂದು ಸುಂದರ ಸಮಾಜದ ನಿರ್ಮಾಣ ಸಾಧ್ಯ,  ಒಬ್ಬ ವ್ಯಕ್ತಿಯ ವಿಕಸನ ಸಾಧ್ಯ... ಆದ್ದರಿಂದಲೇ ವಿದ್ಯೆಗೆ ಮೊದಲ ಮಣೆ, ಗರಿಷ್ಠ ಸ್ಥಾನ....
ಒಂದು ಸುಭಾಷಿತದಿಂದ ಅಯಿದ ಮಾತು "ಸ್ವದೇಶೇ ಪೂಜ್ಯತೇ ರಾಜಃ ವಿದ್ವಾನ್ ಸರ್ವತ್ರ ಪೂಜ್ಯತೆ"....
                                                                       🔹🔹🔹

This is composed in 'Malini' meter which is 15 syllables x 4  = total 60 syllables long. This meter is beset with a pause after the 8th syllable in each line.

In the good old days, did all scholars enjoy royal patronage? Were many of them sycophants of royalty? Also, was it possible to buy them through recognition, titles or rewards? … These are the questions answered by Bharatruhari here …

True scholars do not yield to money …

If so, who are true scholars?

Only those who have understood the basic truth of the world, are true scholars…

The term ‘scholar’ is used in the present in a very base sense … All those who possess ‘bookish knowledge,’ are not scholarly … ‘पण्ड अस्य संजात पण्डितः (paṇḍa asya san̄jāta iti paṇḍitaḥ)’ … The term ‘paṇḍa’ implies one with spiritual awareness … Such of those to whom, spiritual awareness is a natural tendency, is an inborn facet, they are ‘paṇḍitas’ or scholars … Oh King! It is those learned ones who have experienced the insights of truth, that are scholars … Do not deprecate them at any time; do not insult them … This will not bring you glory … The treasure that money brings is valued lower than grass by them … A true scholar’s awareness is not bound by such mounds of money … Money does not enamor them …

They are enriched by their inner wealth, which they value greatly …

This he illustrates anecdotally … An elephant in rage, that too one that has become enraged for the first time! Even a seasoned mahout would fear approach such an elephant … When in such a state, a black liquid trickles from its forehead. Enticing a scholar or learned one, with money is as foolish as tethering an elephant that has such a forehead, with a tender lotus stalk …If there are scholars who are allured by such entrapments, they are not learned at all .. Oh King! As such, do not use the arrogance of your wealth to insult erudition, knowledge or learning … A country that does not respect learning does not progress; it perishes in no time …

This is what Manu, who canonized our first edicts (Manu Smr̥ti), said

वित्तं बन्धुः वयः कर्म
विद्याचैवतु पंचमी |
एतानि मान्य स्थानानि 
गरीयो यद्यदुत्तरम् ||

vittaṁ bandhuḥ vayaḥ karma
vidyācaivatu pan̄camī |
ētāni mān'ya sthānāni 
garīyō yadyaduttaram ||

Manu described the five statuses that accord due respect to each individual in the society; those that regard him/ her, as per his/ her entitlement: Money, Bonding, Age, Service to Society, and Education.
These statuses however should be regarded in the inverse order of importance (गरीयो यद्यदुत्तरम् / garīyō yadyaduttaram), cautioned Manu.  Which means, the first seat of respect is that of knowledge; money is seated the last or least in the order of respect ... The positions in the modern world is unfortunately reversed ...

Money: One may have been blessed with good wealth based on the good deeds of his previous lives. If one uses this for the betterment of the society, for righteous deeds, the wealth would be used beneficially. The society then respects him/ her for such acts ...

Bonding: Bonding in society is greater in value when compared to wealth ... Money related transactions should never result in loss of relationships ... One must give due regard to relationships/ bonding ...

Age: One need not be rich; nor be related/ linked to us in any way ... If one is senior in age, he / she must be respected ... Such a person may not be more knowledgeable too ... One should however bear in mind that God, dwelling within him/ her, has kept this person alive for greater length of time than us, and as such he/ she deserves to be respected on this count ...

Service to Society: There may be those who have ‘service to society’ as the prime object of their living and serve the society incessantly for its upliftment ... Such people need not be rich or well linked or senior in age. Respect them, remembering their good acts that help the society ...

Education/ Knowledge: A learned one, knowledgeable one in the society, is at its apex ... The level of respect accorded to the field of eductaion by our forefathers was not accorded to any other field ... Propagation of education, they considered, was the only way to build a good society, build a progressive individual ... This is how education got the pride of place, the seat of the greatest honour ...
As per a popular subhāṣita:  ‘स्वदेशे पूज्यते राजः, विद्वान् सर्वत्र पूज्यते / Svadēśē pūjyatē rājaḥ, vidvān sarvatra pūjyate’ ...

                   🙏🌸🌸🙏

Thursday, February 25, 2016

ಭರ್ತೃಹರಿಯ ನೀತಿ ಶತಕದಿಂದ ದಿಂದ ಪ್ರೇರಿತ

ಹಸಿದಿರಲಿ ಬಳಲಿರಲಿ ಮುಪ್ಪಿರಲಿ ಕುಂದಿರಲಿ,
ಸ್ವಭಾವತಹ ವನರಾಜ ಸಿಂಹವದು ಏನಾದರಾಗಿರಲಿ,
ಗಜಕುಂಭದ ಮಾಂಸದಾಸೆಯದು ಮರೆಯಾದೀತೆ?
ಹಸಿವು ಹೆಚ್ಚಿದೆಯೆಂದು ಒಣ ಹುಲ್ಲ ತಿಂದೀತೆ?
ಸ್ವಾಭಿಮಾನದ ನಿಜಜ್ಞಾನಿ ತುತ್ತನ್ನಕೆ ಕೈ ಚಾಚಲಾದೀತೆ?
ಶೀಲ ಮತಿ ಮತ ಮಾನರಕ್ಷಣೆಗೆ ಹೋರಾಡದಿರಲಾದೀತೆ?

ಮಾಂಸವಿರದ ಒಣ ಮೂಳೆಯೇ ನಾಯಿಗೆ ಸಾಕು,
ಬೇರೇನಿದ್ದರೂ ಎದುರಿಗೆ ಸಿಂಹಕೆ ಆನೆಯೇ ಬೇಕು,
ಯಾರಿದ್ದರೂ ತಮ್ಮ ಶಕ್ತಿಗನುಗುಣವಾದ ಫಲದ್ದೇ ನಿರೀಕ್ಷೆ,
ಅದನು ಪಡೆಯುವ ಪಡಿಪಾಟಲೇ ಜೀವನವೆಂಬ ಪರೀಕ್ಷೆ.

ಹುಟ್ಟು ಸಾವುಗಳ ಚಕ್ರವದು ಅಬಾಧಿತ,
ಯಾರೂ ಆಗಲಾರರು ಇದರಿಂದ ಮುಕ್ತ,
ಯಾವಜೀವಿಯ ಹುಟ್ಟು ವಂಶಕೆ ತರುವುದೋ ಕೀರ್ತಿ,
ಸಾರ್ಥಕ ಹುಟ್ಟದು ತೋರುವುದು ನಿಜ ಮುಕ್ತಿ.

ಅತಿಕಾಮಿಗಿಂತ ರೋಗಿಯಿಲ್ಲ,
ಭ್ರಾಂತಿ ಭ್ರಮೆಗಿಂತ ವೈರಿಯಿಲ್ಲ,
ಕೋಪಕ್ಕೆ ಮಿಗಿಲಾದ ಬೆಂಕಿಯಿಲ್ಲ,
ಜ್ಞಾನಿಗಿಂತ ಮಿಗಿಲಾದ ಸುಖಿಯಿಲ್ಲ.

ಬೇಕೋ ನಿನಗೆ ಹೆಸರು ಕೀರ್ತಿ,
ಬೇಡ ಪರರ ನಿಂದನೆ ಅಪಕೀರ್ತಿ,
ಸದ್ಗುಣಗಳ ಆಚರಣೆಯದು ಇರಲಿ,
ಹೆಸರು ಕೀರ್ತಿಯ ನಡತೆಯದು ತರಲಿ.

(Contributed by Shri Govind Magal)



Tuesday, February 9, 2016

Neeti Shataka Shloka 12

ಹರ್ತುರ್ಯಾತಿ ನ ಗೋಚರಂ ಕಿಮಪಿ ಕಂ ಪುಷ್ಣಾತಿ ಯತ್ಸರ್ವದಾ-
ಪ್ಯರ್ಥಿಭ್ಯಃ ಪ್ರತಿಪಾದ್ಯಮಾನಮನಿಶಂ ಪ್ರಾಪ್ನೋತಿ ವೃದ್ಧಿಂ ಪರಾಮ್|
ಕಲ್ಪಾಂತೇಷ್ವಪಿ ನ ಪ್ರಯಾತಿ ನಿಧನಂ ವಿದ್ಯಾಖ್ಯಮಂತರ್ಧನಂ 
ಯೇಷಾಂ ತಾನ್ಪ್ರತಿ ಮಾನಮುಜ್ಝತ ನೃಪಾಃ ! ಕಸ್ತೈಃ ಸಹ ಸ್ಪರ್ಧತೇ ||12||

हर्तुर्याति न गोचरं किमपि कं पुष्णाति यत्सर्वदा-
प्यर्थिभ्यः प्रतिपाद्यमानमनिशं प्राप्नोति वृद्धिम्पराम्|
कल्पांतेष्वपि न प्रयाति निधनं विद्याख्यमन्तर्धनं 
येषां तान्प्रति मानमुज्झत नृपाः! कस्तैः सह स्पर्धते||12||

harturyāti na gōcaraṁ kimapi kaṁ puṣṇāti yatsarvadā-
pyarthibhyaḥ pratipādyamānamaniśaṁ prāpnōti vr̥d'dhiṁ parām|
kalpāntēṣvapi na prayāti nidhanaṁ vidyākhyamantardhanaṁ 
yēṣāṁ tānprati mānamujjhata nr̥pāḥ! kastaiḥ saha spardhatē ||12|| 

[ಛಂದಸ್ಸು : ಶಾರ್ದೂಲವಿಕ್ರೀಡಿತ, ಹತ್ತೊಂಬತ್ತು ಅಕ್ಷರಗಳ, ನಾಲ್ಕು ಪಾದದ , ಒಟ್ಟು 76 ಅಕ್ಷರಗಳ ಶ್ಲೋಕವಿದು]
[Meter: Shardula Vikridita: 19 x 4 = 76 syllabic counts]

ವಿದ್ಯೆ ಎಷ್ಟು ದೊಡ್ಡ ಸಂಪತ್ತು ಎಂಬುದನ್ನು ಮತ್ತು ಇಂದು ನಾವೆಲ್ಲ ಮರೆತಿರುವ  ವಿದ್ಯೆಯ ಮಹತ್ವವನ್ನು
ಭರ್ತೃಹರಿ ನಮಗೆ ತಿಳಿಸಿಕೊಡುವ ಸುಂದರ ಶ್ಲೋಕವಿದು...

ಇಂದು ನಾವು ಸಂಪತ್ತಿಗಾಗಿ ವಿದ್ಯೆಯನ್ನು ಕಲಿಯುತ್ತಿದ್ದೇವೆ ಆದರೆ, ವಿದ್ಯೆಯೇ ಒಂದು ದೊಡ್ಡ ಸಂಪತ್ತು ಎಂಬುದನ್ನು ಮರೆತಿದ್ದೇವೆ....

ನಾವು ಗಳಿಸುವ ಹಣ ಅಥವಾ ಬಾಹ್ಯ ಸಂಪತ್ತನ್ನು ದೋಚಲಿಕ್ಕೆ ನಾನಾ ಬಗೆಯ ಜನರು ಮತ್ತು ದಾರಿಗಳಿವೆ, ಮಾರಾಟ ತೆರಿಗೆ, ಆದಾಯ ತೆರಿಗೆ, ಕಳ್ಳಕಾಕರು... ಹೀಗೆಲ್ಲ. ಆದರೆ ವಿದ್ಯೆಯನ್ನು ನಾವು ಸಂಪತ್ತಾಗಿ ಬಳಸಿದಾಗ, ಇದು ಯಾವ ಕಳ್ಳಕಾಕರ ಕಣ್ಣಿಗೂ ಬೀಳದ, ಯಾರೂ ಅಪಹರಿಸಲಾಗದ ಸಂಪತ್ತಾಗಿರುತ್ತದೆ... ಅಷ್ಟೇ ಅಲ್ಲ ವಿದ್ಯೆಯಿಂದ ಪಡೆಯುವ ಆನಂದ "ಕಿಮಪಿ ಶಂ" ಬೇರಾವುದರಿಂದಲೂ ಸಿಗುವುದಿಲ್ಲ... "ಶಂ" ಅಂದರೆ ಅಂತಃಸುಖ. ನಮ್ಮ ಓದಿನಿಂದ ಒಂದು ಅಪರೂಪದ ಸಂಗತಿ ತಿಳಿದಾಗ, ಅಥವಾ ಒಂದು ಹೊಸ ಅಪೂರ್ವ ಅರ್ಥ ಹೊಳೆದಾಗ ನಮ್ಮ  ಒಳಗಿನಿಂದ ಆಗುವ ಆನಂದ ಉಂಟಲ್ಲ , ಅದು ಹೊರಗಿನಿಂದ ನಾವು ಪಡೆಯುವ ಯಾವ ಆನಂದಕ್ಕೂ ಸಮವಲ್ಲ....
ನಮ್ಮ ಬಾಹ್ಯ ಪ್ರಪಂಚದ ಸುಖದಲ್ಲಿ ಅತ್ಯಂತ ಎತ್ತರದ ಸುಖ ಅನ್ನುವ ಸಂಗತಿಯನ್ನೂ ಮೀರಿದ್ದು ವಿದ್ಯೆಯಿಂದ ಬಂದ ಜ್ಞಾನವೆಂಬ ಸುಖ...

ಅದು ಹೇಳಲಿಕ್ಕಾಗದ ಖುಷಿ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುವ ಖುಷಿ... ಇಂಥಾ ಆನಂದವನ್ನು ಬಾಹ್ಯ ಪ್ರಪಂಚದ ಯಾವ ವಸ್ತುವೂ ಕೊಡುವುದಿಲ್ಲವಲ್ಲ...

"ಆರ್ತೋಜಿಜ್ಞಾಸುರರ್ಥಾರ್ಥಿ" ...  ಅಂದರೆ , ಹಣವೆಂಬುದು ನಾವು ಕಷ್ಟದಲ್ಲಿದ್ದವರಿಗೆ ಅಥವಾ ಹಣ ಬಯಸಿ ಬಂದವರಿಗೆ ಹಂಚಿದಷ್ಟೂ ನಮ್ಮಲ್ಲಿ ಕಡಿಮೆಯಾಗುವ ಸಂಪತ್ತು,...
ಆದರೆ ವಿದ್ಯೆ ಹಾಗಲ್ಲ , ಜಿಜ್ಞಾಸುಃ - ಅಂದರೆ ಜ್ಞಾನತೃಷೆಯಿಂದ, ವಿದ್ಯೆಯನ್ನು ಬಯಸಿ ಬಂದವರಿಗೆಲ್ಲ ವಿದ್ಯೆಯನ್ನು ನಿರಂತರ ದಾನ ಮಾಡಿದಷ್ಟೂ , ಹಂಚಿದಷ್ಟೂ... ಆ ಜ್ಞಾನ ನಮ್ಮಲ್ಲಿ ವೃದ್ಧಿಹೊಂದುತ್ತಾ ಹೋಗುತ್ತದೆ. ಅಂದರೆ ಇನ್ನೊಬ್ಬರಿಗೆ ಪಾಠ ಹೇಳಿದಷ್ಟೂ ಆ ಜ್ಞಾನ ನಮ್ಮಲ್ಲಿ ಗಟ್ಟಿಗೊಳ್ಳುತ್ತಾ ಹೋಗುತ್ತದೆ.... ಇದು ಎಷ್ಟು ವೃದ್ಧಿ ಹೊಂದುತ್ತದೆ ಅಂದರೆ... ಉದಾಹರಣೆಗೆ ಒಬ್ಬ ಗುರು ಶಿಷ್ಯನಿಗೆ ಪಾಠ ಹೇಳಿದ್ದು , ತಲೆಮಾರು-ತಲೆಮಾರುಗಳ ಆ ಶಿಷ್ಯಪರಂಪರೆಯಲ್ಲಿ ಮುಂದುವರೆದು ಶತ-ಶತಮಾನಗಳ ಆ ಪುಣ್ಯಫಲ  ಮೂಲ ಆಚಾರ್ಯ ಪುರುಷನಿಗೆ ಸಲ್ಲುತ್ತದೆ...

ಒಂದು ಪಕ್ಷ ವಿದ್ಯೆಯನ್ನು ಗ್ರಹಿಸುವವರು ಸಿಗದೆ ಹಂಚಲಿಕ್ಕಾಗಲಿಲ್ಲ ,  ಆಗ ಕೂಡ ನಾವು ಗಳಿಸಿದ ವಿದ್ಯೆ ಮುಂದಿನ ಜನ್ಮದಲ್ಲಿ ಪುನಃ ಮರಳಿಪಡೆದು ಬಳಸಲಿಕ್ಕೆ ಬರುತ್ತದೆ...

ಆದರೆ ಕೂಡಿಟ್ಟ ಧನ ಹಾಗಲ್ಲ , ಒಂದು ವೇಳೆ ಆ ಹಣ ಹಿಂದಿನ ಜನ್ಮದಲ್ಲಿ  ತಾನೇ ಸಂಪಾದಿಸಿದ್ದು ಎಂದು ಪೂರ್ವಜನ್ಮ ಸ್ಮರಣೆಯಿಂದ ತಿಳಿದು ಬಂದರೂ ಹಕ್ಕನ್ನು ಚಲಾಯಿಸುವ ಅಧಿಕಾರವಿರುವುದಿಲ್ಲ. ಇದು ಹಣಕ್ಕೂ ವಿದ್ಯೆಗೂ ಇರುವ ವ್ಯತ್ಯಾಸ ಮತ್ತು ವಿದ್ಯೆಗಿರುವ ಮಹತ್ವ..

ಎಷ್ಟು ಜನ್ಮ ಹೀಗೇ ವಿದ್ಯೆಯನ್ನು ಮರಳಿ ಪಡೆಯಬಹುದು ? ಎಂಬ ಪ್ರಶ್ನೆಗೆ - "ಕಲ್ಪಾಂತೇಷ್ವಪಿ ನ ಪ್ರಯಾತಿ ನಿಧನಂ" ಒಮ್ಮೆ ಗಳಿಸಿದ ವಿದ್ಯೆ ಅಥವಾ ಜ್ಞಾನ ಕಲ್ಪದ ಅಂತ್ಯದಲ್ಲಿಯೂ ನಾಶ ಹೊಂದುವುದಿಲ್ಲ ಅನ್ನುತ್ತಾನೆ ಭರ್ತೃಹರಿ.

ಜ್ಞಾನಕ್ಕೆ ಎಂದೂ ನಾಶ ಇಲ್ಲ... ಒಂದು ಜನ್ಮದಲ್ಲಿ ಗಳಿಸಿದ ಜ್ಞಾನ ಜನ್ಮಾಂತರಗಳಲ್ಲಿ ಮತ್ತೆ ಬೆಳೆಯುವುದೇ ಹೊರತು ಎಂದೂ ನಾಶ ಹೊಂದುವುದಿಲ್ಲ...

ಒಂದು ಕಲ್ಪಕಾಲ ಅಂದರೆ , "ಚತುರ್ಯುಗ ಸಹಸ್ರಾಂತೇ ಬ್ರಹ್ಮಣೋ ದಿನಮುಚ್ಯತೆ" .. ಅಂದರೆ, 4,32,000 ವರ್ಷಗಳು ಕಲಿಯುಗ, ಇದರ ಎರಡು ಪಟ್ಟು ದ್ವಾಪರ, ಮೂರು ಪಟ್ಟು ತ್ತ್ರೇತಾ, ನಾಲ್ಕು ಪಟ್ಟು ಕೃತ... ಹೀಗೆ ಒಟ್ಟಾಗಿ 43,20,000 ವರ್ಷಗಳು ಒಂದು ಚತುರ್ಯುಗ ವರ್ಷಗಳಾಗುತ್ತವೆ. ಇಂಥಹ 1000 ಚತುರ್ಯುಗ ವರ್ಷಗಳು ಕಳೆಯುವುದೇ ಬ್ರಹ್ಮನ ದಿನಕಲ್ಪ. ಅದೇ 432 ಕೋಟಿ ನಮ್ಮ ವರ್ಷಗಳ ಬ್ರಹ್ಮದೇವರ ಹಗಲು.. ಈ ಹಗಲು ಮುಗಿದು ರಾತ್ರಿಗೆ ಜಾರುವ ಕಾಲವೇ "ಕಲ್ಪಾಂತ್ಯ"...  ಮತ್ತೆ 432 ಕೋಟಿ ವರ್ಷಕಾಲ ಬ್ರಹ್ಮದೇವರ ರಾತ್ರಿಕಲ್ಪ.. ಈ ದೀರ್ಘನಿದ್ರೆಯಿಂದ ಮತ್ತೆ ಸೃಷ್ಟಿಗೆ ಹೊರಬಂದಾಗಲೂ ಒಂದು ಜೀವಕ್ಕೆ ಆ ಹಿಂದಿನ ಕಲ್ಪಾಂತ್ಯದವರೆಗೆ ಗಳಿಸಿದ ಜ್ಞಾನ ಮಾಸುವುದಿಲ್ಲ... ಇದು ದಿನಕಲ್ಪ... ಇದರಂತೆಯೇ ಮಹಾಕಲ್ಪ ಪ್ರಳಯದಲ್ಲೂ ಕೂಡ ಎಂಬುದು ಶಾಸ್ತ್ರಕಾರರ ಅಭಿಮತ...

"ಮಹಾಕಲ್ಪಕಾಲ" ಅಂದರೆ ಬ್ರಹ್ಮದೇವರ ಪೂರ್ಣಾಯುಷ್ಯ, ಅದೇ ಬ್ರಹ್ಮನ ನೂರು ವರ್ಷ.. ಅದನ್ನು ನಮ್ಮ ವರ್ಷದಲ್ಲಿ ಗಣನೆಮಾಡಿಗಾದ 31,104 ಸಾವಿರ ಕೋಟಿ ವರ್ಷಗಳಾಗುತ್ತವೆ
(31,104,000,00,00,000 ವರ್ಷಗಳು)
ಬ್ರಹ್ಮದೇವರ ಇಷ್ಟು ಕಾಲ ಮುಗಿದ ಮೇಲೆ ಮತ್ತೆ ಅಷ್ಟೇ ಕಾಲ ಪ್ರಳಯ... ಹಾಗಾದಾಗಲೂ ಮತ್ತೆ ಸೃಷ್ಟಿ ಶುರುವಾದಾಗ ಹಿಂದೆ ಗಳಿಸಿದ ಜ್ಞಾನ ಜಾಗೃತವಾಗುತ್ತದೆ... ಆದ್ದರಿಂದ ಜ್ಞಾನಕ್ಕೆ ಎಂದಿಗೂ ನಾಶವಿಲ್ಲ...

ಎರಡು ಮನ್ವಂತರಗಳ ನಡುವೆ ಸುಮಾರು 1500 ವರ್ಷಗಳ ಪ್ರಳಯಕಾಲದಲ್ಲಿ ಭಗವಂತ ಮತ್ಸ್ಯರೂಪದಿಂದ ಮುಂದಿನ ಮನ್ವಂತರದ ಮನು ಮತ್ತು ಹಿಂದಿನ ಮನ್ವಂತರದ ವೇದಜ್ಞರಾದ ಋಷಿಮುನಿಗಳನ್ನು ತನ್ನ ಮತ್ಸ್ಯರೂಪವೆಂಬ ಮೀನಿನಾಕಾರದ ದೋಣಿಯಲ್ಲಿ ಕೂಡಿಸಿಕೊಂಡು  ರಕ್ಷಿಸುತ್ತಾ ಮುಂದಿನ ಮನ್ವಂತರದ ಸೃಷ್ಟಿಯಲ್ಲಿನ ಜ್ಞಾನಪ್ರಸಾರಕ್ಕೆ ಅನುವು ಮಾಡಿಕೊಡುತ್ತಾನೆ ಹಾಗೆ ಭಗವಂತನಿಂದಲೇ ಜ್ಞಾನ ಎಂದೂ ಸುರಕ್ಷಿತ... ಆದ್ದರಿಂದ "ವಿದ್ಯಾಖ್ಯಮಂತರ್ಧನಂ" ವಿದ್ಯೆ ಒಳಗಿನ ಸಂಪತ್ತು...ನಮ್ಮ  ಆತ್ಮಾಭಿವೃದ್ಧಿಗೆ ಸಂಬಂಧಪಟ್ಟ ಮಹತ್ವದ ಸಂಪತ್ತು...

ಹೊರಗಿನ ಸಂಪತ್ತು ಹಾಗಲ್ಲ. ಬಾಹ್ಯ ಸಂಪತ್ತು ಅವಿವೇಕದ ಜೊತೆಗೇ ನಮ್ಮೊಟ್ಟಿಗೆ ಬರುವಂತದು... ಆದ್ದರಿಂದ ಅದು ನಮ್ಮ ಅಧಃಪಾತಕ್ಕೂ ಕಾರಣವಾಗಬಹುದು...

"ನ ಸಾಂಪರಾಯ ಪ್ರತಿಭಾತಿ ಬಾಲಂ|
ಪ್ರಮಾದ್ಯಂತಂ ವಿತ್ತ ಮೋಹೇನ ಮೂಢಂ||"

ಭಗವಂತ ಅಂಥ ಬಾಲಿಶ ಸ್ವಭಾವದ ಮಂದಿಗೆ ಸಿಕ್ಕುವುದಿಲ್ಲ... ಏಕೆಂದರೆ  ಶ್ರೀಮಂತಿಕೆಯಿಂದ ದುಡ್ಡಿನ ಮೋಹಕ್ಕೆ ಬಲಿಯಾಗಿ ದಾರಿ ತಪ್ಪಿದವರು ಭಗವಂತನ ಬಳಿಗೆ ಅರ್ಥಾತ್ ಜ್ಞಾನದ ದಾರಿಗೆ ಹೋಗಲಾರರು...

ಜ್ಞಾನದ ಸಂಪತ್ತಿಗೆ ಸಮಾನವಾದ  ಯಾವ ಸಂಪತ್ತೂ ಇಲ್ಲ ಎಂದು ಅರಿತವರು ಯಾರು ಇದ್ದಾರೆಯೋ ಅಂಥಹ  ಜ್ಞಾನಿಗಳ ಮುಂದೆ  "ಎಲೈ ರಾಜರೇ !! " ನಿಮ್ಮ ಶ್ರೀಮಂತಿಕೆಯ ಅಹಂಕಾರದಿಂದ, ಐಶ್ವರ್ಯದ ಮತ್ತು ದೇಶವನ್ನಾಳುವ ಅಧಿಕಾರದ ಗತ್ತನ್ನು  ತೋರಿಸಬೇಡಿ. ಜ್ಞಾನಿಗಳ ಮುಂದೆ ನಿಮ್ಮ ಸಂಪತ್ತಿಗೆ ಯಾವ ಕಾಸಿನ ಬೆಲೆಯೂ ಇಲ್ಲ..  ಏಕೆಂದರೆ  ಜ್ಞಾನಿಗಳ, ವಿದ್ವಾಂಸರ ಮುಂದೆ ಸ್ಪರ್ಧೆಗಿಳಿಯುವ ತಾಕತ್ತು ಯಾರಿಗೂ ಇರುವುದಿಲ್ಲ!  ವಿದ್ಯೆಯ ಸಂಪತ್ತು ಅಷ್ಟು ದೊಡ್ಡದು...
ಆದ್ದರಿಂದ ವಿದ್ವಾಂಸರನ್ನು, ಜ್ಞಾನಿಗಳನ್ನು  ಕಡೆಗಣಿಸದೆ ಗೌರವಿಸಿ...ಎಂದು ಬುದ್ಧಿವಾದ ಹೇಳುತ್ತಾನೆ ಭರ್ತೃಹರಿ...

ಮೂಲತಃ,  ಇಲ್ಲಿ ಭರ್ತೃಹರಿ ತಾನು ಹಿಂದೆ ಅನುಭವಿಸಿದ,  ಆ ಕಾಲದಲ್ಲಿದ್ದ , ಸಂಪತ್ತಿನ, ಶ್ರೀಮಂತಿಕೆಯ, ಅಧಿಕಾರದ ಅಹಂಕಾರದಿಂದ ಮೆರೆಯುತ್ತಿದ್ದ  ರಾಜರುಗಳಿಗೆ, ಶ್ರೀಮಂತರಿಗೆ ವಿದ್ವಾಂಸರ ಬಗೆಗೆ ಕೊಟ್ಟ ಎಚ್ಚರಿಕೆಯ ಮಾತುಗಳಿವು....
              🔹🔹🔹🔹

Tuesday, February 2, 2016

Neeti Shataka Shloka 11

ಶಾಸ್ತ್ರೋಪಸ್ಕೃತ ಶಬ್ದ ಸುಂದರಗಿರಃ ಶಿಷ್ಯಪ್ರದೇಯಾಗಮಾಃ
ವಿಖ್ಯಾತಾಃ ಕವಯೋ ವಸಂತಿ ವಿಷಯೇ ಯಸ್ಯ ಪ್ರಭೋರ್ನಿರ್ಧನಾಃ |
ತಜ್ಜಾಡ್ಯಂ ವಸುಧಾಧಿಪಸ್ಯ ಸುಧಿಯಸ್ತ್ವರ್ಥಂ ವಿನಾಪೀಶ್ವರಾಃ
ಕುತ್ಸ್ಯಾಃ ಸ್ಯುಃ ಕುಪರೀಕ್ಷೈರ್ನ ಮಣಯೋ ಯೈರರ್ಘತಃ ಪಾತಿತಾಃ ||11||

शास्त्रोपस्कृत शब्द सुन्दरगिरः शिष्यप्रदेयागमाः
विख्याताः कवयो वसंति विषये यस्य प्रभोर्निर्धनाः|
तज्जाड्यं वसुधाधिपस्य सुधियस्त्वर्थं विनापीश्वराः
कुत्स्याःस्युः कुपरीक्षैर्न मणयो यैरर्घतः पातिताः||11||

śāstrōpaskr̥ta śabda sundaragiraḥ śiṣyapradēyāgamāḥ
vikhyātāḥ kavayō vasanti viṣayē yasya prabhōnirdhanāḥ |
tajjāḍyaṁ vasudhādhipasya sudhiyastvarthaṁ vināpīśvarāḥ
kutsyāḥsyuḥ kuparīkṣairna maṇayō yairarghataḥ pātitāḥ ||11||

ಛಂದಸ್ಸು: ಈ ಪದ್ಯ ಶಾರ್ದೂಲವಿಕ್ರೀಡಿತಾ ವೃತ್ತದಲ್ಲಿದೆ...(೧೯ಅಕ್ಷರಗಳ ೪ ಸಾಲುಗಳಿಂದಾದ ಒಟ್ಟು ೭೬ ಅಕ್ಷರಗಳ ಛಂದಸ್ಸಿದು)

Meter: This verse is in the śardūlavikrīditā meter (19 syllables per quarter, 4 quarters, total 76 syllables).

ಭರ್ತೃಹರಿ ಈತನಕದ ಹತ್ತು ಶ್ಲೋಕಗಳಲ್ಲಿ ಮೂರ್ಖರು ಹೇಗೆ ಇರುತ್ತಾರೆ, ಅವರ ಸ್ವರೂಪ ಎಂಥದು ಎಂಬುದನ್ನು ವರ್ಣಿಸಿದ.  ಇಲ್ಲಿಂದ ಮುಂದೆ ಸಮಾಜದಲ್ಲಿನ ವಿದ್ವಜ್ಜನರ ಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಡುತ್ತಾನೆ...

ವಿದ್ವಾಂಸರಾದವರು ಎಂದೂ ಉಡಾಫೆಯ ಮಾತುಗಳನ್ನಾಡುವುದಿಲ್ಲ. ತಾವು ಆಡುವ ಪ್ರತಿಯೊಂದು ಮಾತಿಗೆ ಶಾಸ್ತ್ರದ ಆಧಾರ ಕೊಟ್ಟು ಮಾತನಾಡುತ್ತಾರೆ. (ತದುಕ್ತಂ ಬ್ರಹ್ಮಾಂಡೆ, ತದುಕ್ತಂ ಸ್ಕಾಂದೆ... ಹೀಗೆ) ಆದ್ದರಿಂದ ಅವರಾಡುವ ಒಂದೊಂದು ಶಬ್ದವೂ, ವಾಕ್ಯವೂ ಶಾಸ್ತ್ರಗಳ ಹಿನ್ನೆಲೆಯಿಂದ ಪರಿಷ್ಕಾರಗೊಂಡದ್ದು ಮತ್ತು ಪ್ರತಿಯೊಂದು ಮಾತೂ ಶಾಸ್ತ್ರದ ಪುರಸ್ಕಾರದಿಂದ ಅಲಂಕಾರಗೊಂಡದ್ದಾಗಿರುತ್ತದೆ. ಅವರ ಮಾತಿನ ಮೋಡಿ, ಶಬ್ದಗಳ ಆಯ್ಕೆ , ಕೇಳುವುದಕ್ಕೆ ಮಧುರವಾಗಿದ್ದು ಆಡು ಭಾಷೆಗೆ ಒಗ್ಗುವ ನಡೆಯಲ್ಲಿ ಮಾತನಾಡುತ್ತಾರೆ... ಭಾಷೆಯ ಬನಿಯನ್ನು (ಭಾಷೆಯ ಗುಟ್ಟನ್ನು) ಅರಿತು ಸ್ವಚ್ಛವಾಗಿ ಮಾತನಾಡುವುದರಿಂದ ಅವರಾಡುವ ಮಾತು ಕೇಳುವುದಕ್ಕೆ ಇಂಪಾಗಿದ್ದು , ಮಧುರವಾಗಿದ್ದು , ಕೇಳಿದವರಿಗೆ ಸಹಜವಾಗಿ ಅರ್ಥವಾಗುತ್ತದೆ.  ಅಂಥಹ ವಿಂದ್ವಾಸರು ಮಾತ್ರ ತಮ್ಮ ಶಿಷ್ಯರಿಗೆ ಆಗಮವನ್ನು ದಾನಮಾಡಬಲ್ಲರು.. ಅರ್ಥಾತ್, ಶಾಸ್ತ್ರದಲ್ಲಿ ಹೇಳಿದ್ದನ್ನು ಶಿಷ್ಯರಿಗೆ ಅರ್ಥವಾಗುವಂತೆ ಪಾಠ, ಪ್ರವಚನ ಮಾಡಬಲ್ಲರು...

ಆದರೆ  ತಿಳಿದುಕೊಂಡವರಿಗೆಲ್ಲ ಇನ್ನೊಬ್ಬರಿಗೆ ತಿಳಿಹೇಳುವ ಶಕ್ತಿ ಇರಬೇಕಾಗಿಲ್ಲ.  ಅದು ಬೇರೆಯೇ ಕಲೆ... ತಿಳಿದುಕೊಳ್ಳುವುದು ಒಂದು ಕಲೆಯಾದರೆ, ತಿಳಿದುಕೊಂಡದ್ದನ್ನು ಇನ್ನೊಬ್ಬರಿಗೆ ತಿಳಿಹೇಳುವುದು ಮತ್ತೊಂದು ಕಲೆ...  ತಿಳಿದವರಿಗೆಲ್ಲ ಪ್ರವಚನ ಮಾಡಿ ಇನ್ನೊಬ್ಬರಿಗೆ ತಿಳಿಸಿಕೊಡುವುದಕ್ಕೆ ಬರುವುದಿಲ್ಲ . ಸಮಾಜದಲ್ಲಿ ಅಂತಹ ಪಂಡಿತರು ಬೇಕಾದಷ್ಟು ಮಂದಿ ಇರುತ್ತಾರೆ ಅನ್ನುತ್ತಾನೆ ಭರ್ತೃಹರಿ. 

ಭಾರವಿಯ ಒಂದು ದೊಡ್ಡ ಮಾತು ಹೀಗಿದೆ :- " ಭವಂತಿ ತೇ ಸಭ್ಯತಮಾಃ ವಿಪಶ್ಚಿತಾನ್ ಮನೋರಥಂ ವಾಚಿ ನಿವೇಶಯಂತಿ" ಎಂದು. ಅಂದರೆ,

"ಯಾರಾದರೂ ತಮ್ಮ ಮನಸ್ಸಿನಲ್ಲಿದ್ದುದನ್ನು ತಿಳಿಯಾದ ಮಾತಿನಿಂದ ಇನ್ನೊಬ್ಬರಿಗೆ ಮುಟ್ಟಿಸಬಲ್ಲವರಾದರೆ, ಅವರೊಬ್ಬ ದೊಡ್ಡ ಕಲೆಗಾರರು.. ಅದೊಂದು ದೊಡ್ಡ ಕಲೆಗಾರಿಕೆ" ಅನ್ನುತ್ತಾನೆ ಪುರಾತನ ಕವಿ "ಭಾರವಿ".... ಆದ್ದರಿಂದ ಮಾತುಗಾರಿಕೆ ಎನ್ನುವುದು ಬೇರೆಯೇ ಕಲೆ...

ಇಂಥಹ ವಿಖ್ಯಾತರಾದ ವಿದ್ವಾಂಸರು ಯಾವ ರಾಜನ ರಾಜ್ಯದಲ್ಲಿ ಬಡವರಾಗಿ ಬದುಕುತ್ತಾರೋ, ಹಣವಿಲ್ಲದೆ ಒದ್ದಾಡುತ್ತಿರುತ್ತಾರೋ , ಅದು ಮೂರ್ಖರು ಆಳುವ ರಾಜ್ಯ ಅಥವಾ ದೇಶ... ಅದು ಆ ದೇಶದ ಅಥವಾ ಆ ರಾಜ್ಯದ ರಾಜನ ಮೂರ್ಖತನವನ್ನು , ಜಾಡ್ಯತನವನ್ನು ಪ್ರದರ್ಶಿಸುತ್ತದೆ...

ಭರ್ತೃಹರಿಯ ಈ ಶ್ಲೋಕವನ್ನು ನಾವಿರುವ ಈ ಕಾಲಘಟ್ಟಕ್ಕೆ ಹೋಲಿಸುವುದಾದರೆ, ಯಾವ ರಾಜ್ಯದಲ್ಲಿ , ಯಾವ ಆಡಳಿತದವು , ಆ ರಾಜ್ಯದ ದೊಡ್ಡ ವಿದ್ವಾಂಸರನ್ನು ಗುರುತಿಸದೆಒಬ್ಬನನ್ನು ಕೇವಲ ಯಾವ ಜಾತಿ, ಯಾವ ಪಂಗಡ, ಅನ್ನುವ ಜಾತಿವಾರು ವಿಭಾಗ ಮಾಡಿಕೊಂಡು ಹಣವನ್ನು ಹಂಚಿ, ಬಡತನದಿಂದ ಬದುಕುತ್ತಿರುವ ನಿಜವಾದ ವಿದ್ವಾಂಸರನ್ನು ದೂರ ಇಡುತ್ತಾನೋ, ಅದು ಅಂಥಹ ರಾಜ್ಯಾಡಳಿತದ ಮತ್ತು ಆ ರಾಜ್ಯದ ಮುಖ್ಯಮಂತ್ರಿಯ ಜಾಡ್ಯ ಮತ್ತು ಮೂರ್ಖತನವನ್ನು ಎತ್ತಿ ತೋರಿಸುತ್ತದೆ...

ಆದರೆ, ಅದರಿಂದ ನಷ್ಟ ಆ ದೇಶಕ್ಕೆ ಅಥವಾ ರಾಜ್ಯಕ್ಕೇ ಹೊರತು ಆ ವಿದ್ವಾಂಸನಿಗಲ್ಲ.. ಅನ್ಯಾಯ ಮಾಡಿದ ರಾಜ ಮೂರ್ಖನಾದ ಅಷ್ಟೇ. ಏಕೆಂದರೆ ದುಡ್ಡಿಲ್ಲದೆಯೂ ಜ್ಞಾನಿಗಳು ಎಂದೂ ಶ್ರೀಮಂತರೆ. ಅವರು ಯಾರಿಗೂ ಹೆದರದೆ, ದುಡ್ಡಿನ ಹಂಗಿಲ್ಲದೇ ಬದುಕಲು ಸರ್ವಸಮರ್ಥರು, ಪೂಜನೀಯರಾಗೇ ಬದುಕುವವರು...

ಭರ್ತೃಹರಿ ಒಂದು ಸುಂದರ ದೃಷ್ಟಾಂತದ ಮೂಲಕ ವಿದ್ವಾಂಸರ ಎತ್ತರವನ್ನು , ಗೌರವವನ್ನು ಎತ್ತಿ ಹಿಡಿಯುತ್ತಾನೆ...
ಪಂಡಿತರು ಎಂದರೆ, ಸ್ವಯಂ ಪ್ರಭೆ ಇರುವಂಥ ಒಂದು ವಜ್ರದ ಮಣಿಯಂತೆ... ಅಂಥಹ ಒಂದು ಮಣಿಯಿದೆ, ತುಂಬ ಬೆಲೆಬಾಳುವ ಮಣಿ ಅದು. ಆ ಮಣಿಯನ್ನು ಪರೀಕ್ಷಿಸಲು ಗೊತ್ತೇ ಇಲ್ಲದ ಪರೀಕ್ಷಕನಿಂದ, ಮಣಿಗೆ   ಕಡಿಮೆಬೆಲೆ ಕಟ್ಟಿದ ಮಾತ್ರಕ್ಕೆ , ಮಣಿ ತನಗಿರುವ ಮಹತ್ವವನ್ನು ಕಳೆದು ಕೊಂಡೀತೇ ?... ಎಂದೂ ಕಳೆದುಕೊಳ್ಳುವುದಿಲ್ಲ...

ಬೆಲೆ ಕಡಿಮೆ ಎಂಬ ನಿರ್ಣಯವಾಗಿದ್ದು ಮಣಿಯ ದೋಷವಲ್ಲ, ಬದಲಾಗಿ ಅದು ಕೆಟ್ಟ ಪರೀಕ್ಷಕನ ದೋಷ...
ಇದು ಕೇವಲ ಒಬ್ಬ ರಾಜನಿಗೆ ಮಾತ್ರ ಅನ್ವಯಿಸುವುದಷ್ಟೇ ಅಲ್ಲ , ಸಮಾಜದಲ್ಲಿ ಒಬ್ಬ ವಿದ್ವಾಂಸನನ್ನು, ಜ್ಞಾನಿಯನ್ನು  ಗುರುತಿಸದೆ ಇರುವ ಸಮಾಜದ ಜನಸಾಮಾನ್ಯರಿಗೂ ಅನ್ವಯವಾಗುವಂತದು...ಆಗ ಸಮಾಜ ಕೂಡ ಅಂಥಹ ವಿದ್ವಾಂಸನ ಜ್ಞಾನದಿಂದ ವಂಚಿತವಾಗುವಂತಾಗುತ್ತದೆ... ಹಾಗಾಗಿ ವಿದ್ವಾಂಸರನ್ನು ಕಡೆಗಾಣಿಸದೆ ಗೌರವಿಸಬೇಕಾದದ್ದು ಸಮಾಜದ ಕರ್ತವ್ಯವೂ ಆಗಿದೆ ಎಂಬುದು ಭರ್ತೃಹರಿಯ ಅಂತರಂಗದ ಅರ್ಥ ಕೂಡಾ ಹೌದು.

ಈ ಸಂದರ್ಭೋಚಿತ ಒಂದು ಗಾದೆ ಮಾತು ಕನ್ನಡದಲ್ಲಿ ಹೀಗೆ ಬಂದಿದೆ :

"ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ? ಎಂಬ ಗಾದೆ ಮಾತಿನಂತೆ...ವಿದ್ವಾಂಸರ ಮತ್ತು ವಿದ್ಯೆಯ ಹಿರಿಮೆಯನ್ನೇನು ಬಲ್ಲರು ಗುರುತಿಸಲಾಗದ ಅವಿವೇಕಿಗಳು)
🔹🔹🔹